Nishyabda Nishi – Kannada Short Film – Rating 3*

ನಿಶ್ಯಬ್ಧ ನಿಶಿ: (ಕಿರುಚಿತ್ರ) (Silent Night)
ಇದು ಏಕವ್ಯಕ್ತಿ ಚಿತ್ರವಷ್ಟೇ ಅಲ್ಲ, ಏಕಪಾತ್ರಾಭಿನಯದ ಚಿತ್ರವೂ ಹೌದು. ಏಕಾಂಗಿ ಪಾತ್ರವೊಂದು ಏಕಾಂತದಲ್ಲಿ ನಡೆಸುವ ಕಾಲ್ಪನಿಕ ಏಕೋಪಾಧ್ಯಾಯ ಶಾಲೆ. ಇಲ್ಲಿ ವಿದ್ಯಾರ್ಥಿಗಳಾಗಿ ಬಂದು ಹೋಗುವವರಲ್ಲಿ ದೇವರ ಮಕ್ಕಳೂ ಇದ್ದಾರೆ, ದೆವ್ವದ ಮಕ್ಕಳೂ ಇದ್ದಾರೆ. ಉಪಾಧ್ಯಾಯನಿಗೆ ಉಪದ್ರವ ಕೊಡುವ, ಸದಾ ಅಳುವ,ಮಲಗದೆ ಮುಲುಗುವ ಮಗುವೂ ಇದೆ. ಇಲ್ಲಿ ನಡೆಯುವ ಪಾಠ ಕಾಲೇಜಿಗೆ ಸಂಬಂಧಿಸಿದ್ದಲ್ಲ; ಪಾಠ ಮಾಡುವವನ ಸೈಕಾಲಜಿಗೆ ಸಂಬಂಧಿಸಿದ್ದು. ಇದು ನಡೆಯುತ್ತಿರುವುದು ಕತ್ತಲೆಯ ಸಮಯದಲ್ಲೋ ಅಥವಾ ಕತ್ತಲೆಯ ಕೋಣೆಯಲ್ಲೋ ಅಂತ ತಿಳಿಯಬೇಕಾದರೆ ಕೊನೆಯವರೆಗೂ ಕಾಯಬೇಕು.
ಕೊರೊನಾ ಕಾಲದಲ್ಲಿ “ಬಿಡುಗಡೆ” ಆಗಿರೋ ಈ ಕಿರುಚಿತ್ರ, ಕ್ವಾರಂಟೈನ್ ನಲ್ಲಿ “ಬಂಧಿ”ಯಾದವರ ಮನಸ್ಥಿತಿಯ ತರಹ ಕಂಡರೂ, ಅದು ಕೇವಲ “ಲಾಕ್”ತಾಳೀಯ  ಅನ್ನಬಹುದು. ಅರೆಗತ್ತಲೆಯಲ್ಲಿ ಕ್ಲೋಸ್ ಅಪ್ ನಲ್ಲಷ್ಟೇ ಕಾಣಿಸಿಕೊಳ್ಳುವ ಪಾತ್ರಧಾರಿಯ ಪರ್ಸನಾಲಿಟಿ ಸ್ಪಷ್ಟವಾಗಿ ಕಾಣಿಸದಿದ್ದರೂ, ಪಾತ್ರ ಮಾತ್ರ “ಸ್ಪ್ಲಿಟ್ ಪರ್ಸನಾಲಿಟಿ” ಯನ್ನು ಹೊಂದಿರುವುದು ತಿಳಿಯುತ್ತದೆ.   
“ಝಣಝಣ ಹಣ” ದ ರೈಮ್ ನಿಂದ ಆರಂಭವಾಗುವ ಶಾಲೆ, “ಜನಗಣಮನ”  ಆಂಥೆಮ್ ನಿಂದ ಮುಗಿಯುತ್ತದೆ. ಇದರ ಮಧ್ಯೆ ಕೆಜಿಎಫ್ ಗರುಡನನ್ನು ಗುಮ್ಮನಾಗಿಸಿದ್ದಾರೆ, ಗುಮ್ಮಗಳಿಗೆ ಕಟ್ಟಪ್ಪ ಬಾಹುಬಲಿಯನ್ನು ಕೊಂದ ಕಾರಣ ಕೇಳಿ ಸುಮ್ಮನಾಗಿಸಿದ್ದಾರೆ. ರಾಜ್ ಕುಮಾರ್, ವಿಷ್ಣು, ಅಂಬಿ, ದರ್ಶನ್, ಸುದೀಪ್, ಲತಾ ಮಂಗೇಶ್ಕರ್, ಶ್ರೀದೇವಿ, ರಂಗಿತರಂಗದ ಭೂತ, ಕೆಜಿಎಫ್  2 ನ ರೌಡಿಗಳು ಎಲ್ಲರೂ ಮೇಷ್ಟ್ರ ವಾಯ್ಸಲ್ಲಿ, ಕಲ್ಪನೆಯ ಕ್ಲಾಸಲ್ಲಿ ಅಟೆಂಡೆನ್ಸ್ ಹಾಕಿ ಹೋಗುತ್ತಾರೆ. ಟೆನ್ಷನ್ ನಲ್ಲಿರುವಂತೆ ಕಾಣುವ ನಿವೃತ್ತ ಟೀಚರ್, ಕೊನೆಗೆ ವೀಕ್ಷಕರನ್ನೂ ಅಟೆನ್ಷನ್ ನಲ್ಲಿ‌ ನಿಲ್ಲಿಸಿ ರಾಷ್ಟ್ರಗೀತೆ ಹಾಡಿ ಸ್ಕೂಲ್ ಘಂಟೆ ಬಾರಿಸುತ್ತಾರೆ. 
ಒಬ್ಬರೇ ಹದಿನೈದು ನಿಮಿಷ ಎಷ್ಟೂಂತ‌ ಮಾತಾಡಬಹುದು? ಏನೂಂತ ಮಾತಾಡಬಹುದು? ಅಂತ ನಾವು ಯೋಚನೆ ಮಾಡಿದ್ರೆ, ಮಾತುಕತೆಯಲ್ಲೇ ಒಂದು ಪಾತ್ರವನ್ನು ಬೆಳೆಸಿ ಪೋಷಿಸಿದ್ದಾರೆ ಸಂದೀಪ್ ಮಲಾನಿ. ಸಂಭಾಷಣೆಯು ಬರೆದುಕೊಟ್ಟಂತಿರದೆ ಹಲವೆಡೆ ಸ್ಪಾಂಟೇನಿಯಸ್ ಆಗಿ ಮಾತಾಡಿದಂತಿದೆ. ಅದೇ ಈ ಚಿತ್ರಕ್ಕೆ ಪ್ಲಸ್ ಪಾಯಿಂಟ್, ಕ್ಷಣ ಕ್ಷಣಕ್ಕೂ ಬದಲಾಗುವ ಮಾನಸಿಕ ವ್ಯಕ್ತಿತ್ವವನ್ನು ಬಹಳ ಪರಿಣಾಮಕಾರಿಯಾಗಿ ಪ್ರದರ್ಶಿಸಿದ್ದಾರೆ.  ಮಾನ”ಸಿಕ್” ವ್ಯಕ್ತಿ ಏನು ಮಾತಾಡಿದರೂ ಅದಕ್ಕೆ ಅರ್ಥವಿಲ್ಲದ್ದುದರಿಂದ ಏನು ಹೇಳಿದರೂ ಓಕೆ. ಅದರೆ ಅದನ್ನೇ ಕಾರಣವಾಗಿಟ್ಟುಕೊಂಡು,  ರಾಷ್ಟ್ರಗೀತೆ ಹಾಡಿದಾಗ ನುಸುಳಿದ ತಪ್ಪಿಗೆ, ಯಾಕೆ? ಅಂತ ಪಾತ್ರದಲ್ಲಿ ಕೇಳುವುದಕ್ಕಿಂತ ಪಾತ್ರಧಾರಿಯಲ್ಲೋ, ನಿರ್ದೇಶಕರಲ್ಲೋ ಕೇಳುವುದು ಸಮಂಜಸ. ಸಾಧ್ಯವಾದರೆ ಇನ್ನೊಂದು ಬಾರಿ ರೀರೆಕಾರ್ಡಿಂಗ್ ಮಾಡಿದರೂ ತಪ್ಪಿಲ್ಲ. 
ಕುತೂಹಲ ಕೆರಳಿಸುವ ಸಿಲ್ವರ್ ಮಲಾನಿಯವರ ನಿರೂಪಣೆ, ಮುಖದಲ್ಲೇ ಎಲ್ಲ ಭಾವಗಳನ್ನು ಮೂಡಿಸಿ ಒಂದು ಕಾಲ್ಪನಿಕ ಲೋಕವನ್ನು ಸೃಷ್ಠಿಸಬೇಕಾದ ಅನಿವಾರ್ಯತೆ ಇರುವ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ ಸಂದೀಪ್ ಮಲಾನಿ, ಪಾತ್ರದ ಮನೋಸ್ಥಿತಿಯಲ್ಲಾಗುವ ಬದಲಾವಣೆಗೆ ಸೂಕ್ತವಾಗಿ ಹಿನ್ನೆಲೆ ಸಂಗೀತ ನೀಡಿದ ವೀರ್ ಸಮರ್ಥ್ ಪ್ರಯತ್ನ ಶ್ಲಾಘನೀಯ.

Review by Lokesh Shankar Narayan

[post_gallery]

Best comment will get a FREE movie ticket.

Leave a Reply

Your email address will not be published.


*