Arpane – Kannada movie Review

ಅರ್ಪಣೆ:

ಮನುಷ್ಯನಿಗೆ ಎರಡು‌‌ ಸಲ ಬಾಲ್ಯಾವಸ್ಥೆ ಬರುತ್ತದೆ. ಒಂದು ಹುಟ್ಟಿದ ಮೇಲೆ; ಇನ್ನೊಮ್ಮೆ ವೃದ್ಧಾಪ್ಯದಲ್ಲಿ. ಬಾಲ್ಯದಲ್ಲಿ ಅಪ್ಪ-ಅಮ್ಮ ಮಗುವನ್ನು ನೋಡಿಕೊಂಡ ಹಾಗೆ ವೃದ್ಧಾಪ್ಯದಲ್ಲಿ ಮಕ್ಕಳು ಅಪ್ಪ-ಅಮ್ಮನನ್ನು ಮಗುವಿನ ತರ ನೋಡಿಕೊಳ್ಳಬೇಕು. ಇದು ಸೃಷ್ಟಿಯ ನಿಯಮ; ಜೀವನ ಚಕ್ರ. ಮಗನ ಬದುಕಿಗಾಗಿ ತನ್ನ ಸರ್ವಸ್ವವನ್ನೇ ಸಮರ್ಪಣೆ ಮಾಡಿರುವ ಅಮ್ಮನಿಗಾಗಿ ಮಗ ಮಾಡುವ ಉಪಕಾರ ಸ್ಮರಣೆ, ಈ “ಅರ್ಪಣೆ” ಕಿರು ಸಿನಿಮಾದ ಒನ್ ಲೈನ್ ಕತೆ.

ಸ್ಟ್ರೋಕ್ ಹೊಡೆದು ಬೆಡ್ಡಲ್ಲಿ ಮಲಗಿದ ಅತ್ತೆಯನ್ನು ವೃದ್ಧಾಶ್ರಮದಲ್ಲಿಡುವಂತೆ ಹೆಂಡತಿ ಮಾಡಿದ “ಅಪ್ಪಣೆ”ಗೆ ಮಣಿದು, ಅಜ್ಜಿ ಮನೇಲಿದ್ರೆ ನಾನಿರೋದಿಲ್ಲ ಅಂತ ಮನೆ ಬಿಟ್ಟು ಹೋಗುವ ಮಗನ ಒತ್ತಾಯಕ್ಕೆ ಒಪ್ಪಿದ “ಅಪ್ಪನೇ” ತನ್ನ ತಾಯಿಯನ್ನು ಕರೆದುಕೊಂಡು ಹೋಗಿ, ಅವಳು ತನಗಾಗಿ ಕಳೆದುಕೊಂಡದ್ದನ್ನು ಮರಳಿ ಆಕೆಗೆ “ಅರ್ಪಣೆ” ಮಾಡುವುದರೊಂದಿಗೆ ಕತೆಯಲ್ಲೊಂದು‌ ನ್ಯಾಯಯುತ ಪರಿಹಾರ ದೊರಕಿಸುವ ಪ್ರಯತ್ನವನ್ನು ನಿರ್ದೇಶಕ ಸೋನಿ ಆಚಾರ್ಯ ಮಾಡಿದ್ದಾರೆ.

ಮಾನವೀಯ ಸಂಬಂಧಗಳು ‘ಸೋಲ್ಡ್’ ಆಗಿರುವ ಈ ಕಾಲದಲ್ಲಿ ಬಂದಿರುವ ಓಲ್ಡ್ ಏಜ್ ಹೋಮ್ ನ ಈ ಕತೆ ಸಮಕಾಲೀನ ಕೌಟುಂಬಿಕ ಸಮಸ್ಯೆಯ ಮೇಲೆ ಬೆಳಕು ಬೀರುವಲ್ಲಿ ಯಶಸ್ವಿಯಾಗಿದೆ. “ಸ್ಟ್ರೋಕ್ ಆಗಿರುವ ಅವರಮ್ಮನ ನೋಡೋರಿದ್ರು, ಆದ್ರೆ ನೋಡ್ಕೊಳ್ಳೋರಿರಲಿಲ್ಲ”, “ಮನುಷ್ಯರೇ ಇಲ್ಲದ ಮನೇಲಿ ಜೀವನ ಮಾಡಬಹುದು. ಆದ್ರೆ ಮನುಷ್ಯತ್ವ ಇಲ್ಲದವರ ಮನೇಲಿ ಜೀವನ ಮಾಡೋದು ಸಾಧ್ಯಾನೇ ಇಲ್ಲ” ಇಂತಹಾ ಚತುರ ಸಂಭಾಷಣೆಗಳಿವೆ. ಸೆಂಟಿಮೆಂಟ್ ಚಿತ್ರವಾದರೂ ಒಂದು ಸಸ್ಪೆನ್ಸ್ ಎಲಿಮೆಂಟ್ ಇದೆ.

ಸಂದೀಪ್ ಮಲಾ‌ನಿ ಈ ಹಿಂದೆ “ಅಪ್ಪ” ಅನ್ನುವ ಕಿರು ಚಿತ್ರದಲ್ಲಿ ಅಪ್ಪನಾಗಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಅಸಹಾಯಕ ಅಪ್ಪನಾಗಿ, ಮಮತಾಮಯಿ ಮಗನಾಗಿ ಎರಡು ಶೇಡ್ ಗಳಿರುವ ಪಾತ್ರದಲ್ಲಿ ತನ್ಮಯತೆಯಿಂದ ನಟಿಸಿದ್ದಾರೆ. ಭಾವಪೂರ್ಣ ಸನ್ನಿವೇಶಗಳಲ್ಲಿ‌ ಸಂದೀಪ್ ಅತ್ಯುತ್ತಮ ಅಭಿನಯ ನೀಡಿ, ಇಂತಹಾ ಪಾತ್ರಗಳಲ್ಲೂ ತಾವು ಸೈ ಎನ್ನಿಸಿಕೊಳ್ಳಬಹುದೆಂದು ತೋರಿಸಿಕೊಟ್ಟಿದ್ದಾರೆ. ಕಾವ್ಯಪ್ರಕಾಶ್, ಚಂದ್ರಮೌಳಿ ಹಾಗೂ ಹಿರಿಯ ಕಲಾವಿದೆ ಶ್ಯಾಮಲಾ ನೈಜ್ಯ ಅಭಿನಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾರೆ. ಹಿನ್ನೆಲೆ ಸಂಗೀತ ಕೂಡಾ ದೃಶ್ಯಗಳ ಭಾವ ತೀವ್ರತೆಗೆ ಸಾಥ್ ನೀಡಿದೆ. ಮನೆಯಲ್ಲಿರುವ ಮುದಿಯರನ್ನು ವೃದ್ದಾಶ್ರಮಕ್ಕೆ ಸೇರಿಸಿ ಪೀಡೆ ತೊಲಗಿತು ಎಂದುಕೊಂಡ ಹದಿಹರೆಯದವರಿಗೆ, ಹದಿನೇಳು ನಿಮಿಷಗಳ ಈ ಚಿತ್ರವನ್ನು ತೋರಿಸಿ. ಅಪ್ಪ-ಅಮ್ಮನ ಋಣ ತೀರಿಸಿ, ಅವರನ್ನು ಖುಷಿಯಾಗಿಡುವ ದಾರಿ ಖಂಡಿತಾ ಕಾಣಿಸುತ್ತದೆ.

Review by Lokesh Narayan

Best comment will get a FREE movie ticket.

Leave a Reply

Your email address will not be published.


*