K Prabhakaran’s Collection of short short stories (Preman Illath’s Book)

ನನ್ನದೊಂದು ಅನುವಾದಿತ ಕಥಾ ಸಂಕಲನ…ಮಲಯಾಳಂ ಲೇಖಕ ಪ್ರೇಮನ್ ಇಲ್ಲತ್ ಅವರ ಆಕ್ರಮಣ ಕಾಲದ ಪ್ರೇಮ ಮತ್ತು ಇತರೆ ಮಲಯಾಳಂ ಕಥೆಗಳು….


ಕೆಲವು ದಿನಗಳಿಂದ ಅಪರಿಚಿತ ಕಥೆಗಾರರೊಬ್ಬರು ಸೃಷ್ಟಿಸಿದ, ನನಗೆ ತೀರ ಹೊಸದಾದ ಕಥಾಲೋಕವೊಂದರಲ್ಲಿ ನಾನು ವಿಹರಿಸುತ್ತಿದ್ದೇನೆ.

ಈ ಬರಹಗಾರರ ಹೆಸರು ಪ್ರೇಮನ್ ಇಲ್ಲತ್, ಮಲಯಾಳಂ ಭಾಷೆಯ ಕಥೆಗಾರ. ಈವರೆಗೆ ಪ್ರೇಮನ್ ಅವರ ಕಥೆ ಓದುವುದು ಬಿಡಿ ಹೆಸರು ಕೂಡ ಕೇಳಿರಲಿಲ್ಲ. ಕನ್ನಡ ಮತ್ತು ಮಲಯಾಳಂ ಭಾಷೆಗಳ ಕೊಡುಕೊಳೆಗೆ ಬಹಳ ಹಳೆಯ ನಂಟು. ಆ ದೆಸೆಯಿಂದ ಅನೇಕ ಮಲಯಾಳಂ ಲೇಖಕರು ಕನ್ನಡಿಗರಾಗಿದ್ದಾರೆ. ತಮ್ಮ ಸಾಹಿತ್ಯದ ಮೂಲಕ ಕನ್ನಡ ಸಂವೇದನೆಯನ್ನು ಬೆಳೆಸಲು ನೆರವಾಗಿದ್ದಾರೆ. ನಾನೂ ಅಂಥ ಹತ್ತಾರು ಲೇಖಕರು ಚಿತ್ರಿಸಿದ ಬದುಕನ್ನು ಕನ್ನಡದಲ್ಲಿ ಓದಿ ಬೆರಗಾಗಿದ್ದೇನೆ. ಹೀಗಿದ್ದರೂ, ಪ್ರೇಮನ್ ನನಗಂತೂ ಈವರೆಗೆ ಅಪರಿಚಿತರೆ ಆಗಿದ್ದರು. ಆದರೆ ಇನ್ನು ಮುಂದೆ ನಾನು ಹಾಗೆ ಹೇಳಲಾರೆ. ಅವರ ಅಪರೂಪದ ಕಥೆಗಳನ್ನು ಓದಿದ ಮೇಲೆ, ಅವು ಸೃಷ್ಟಿಸಿದ ಕಥಾಲೋಕವನ್ನು ಬೆರಗು-ಅಚ್ಚರಿಯಿಂದ ನನ್ನದಾಗಿಸಿಕೊಂಡ ಮೇಲೆ ಅವರೀಗ ತೀರ ಪರಿಚಿತರು.

ಪ್ರೇಮನ್ ಒಬ್ಬ ಪರಿಣತ ಕಥೆಗಾರ. ವಸ್ತುವಿಷಯ, ನಿರೂಪಣೆ, ಶೈಲಿಗಳಲ್ಲಿ ವೈವಿಧ್ಯತೆ ಸಾಧಿಸಿರುವ ಅಪರೂಪದ ಕುಶಲಿಗ. ಈ ಸಂಗ್ರಹದ ಹನ್ನೆರಡು ಕಥೆಗಳ ವಸ್ತು, ಭಾಷೆ, ಕಥಾಪರಿಸರ ಮತ್ತು ಅಂತಿಮವಾಗಿ ಅವು ಓದುಗರಲ್ಲಿ ಉಂಟು ಮಾಡುವ ಪರಿಣಾಮ ಎಲ್ಲವೂ ಭಿನ್ನ ಭಿನ್ನ. ಬದುಕಿನ ಅನಿಶ್ಚಯತೆ, ಅಸಂಗತತೆ, ಬದುಕು ನೀಡುವ ನೋವು, ಸುಖ, ವಿನೋದ ಮತ್ತು ಒಳನೋಟಗಳನ್ನು ಹಸ್ತಾಂತರಿಸುವ ಈ ಕಥೆಗಳ ಜಗತ್ತು ಕೂಡ ದೊಡ್ಡದು.

ಪ್ರೇಮನ್ ಅವರದು ಸರಳವಾದ, ನೇರವಾದ, ಪರಿಣಾಮಕಾರಿ ಭಾಷಾ ಬಳಕೆಯ ಶೈಲಿ. ಸಣ್ಣ ಸಣ್ಣ ವಾಕ್ಯಗಳು, ಸಂಭಾಷಣೆಯ ಮೂಲಕ ವ್ಯಕ್ತಗೊಳ್ಳುವಂಥವು. ಈ ವಾಕ್ಯಗಳು ಹಲವೊಮ್ಮೆ ಕವಿತೆಯ ಭಾವತೀವ್ರತೆಯನ್ನು ಉಂಟುಮಾಡುವ ರೂಪಕಗಳಾಗಿ ಬದಲಾಗಿ ಬಿಡುತ್ತವೆ. ಇದು ಅವರೇ ರೂಢಿಸಿಕೊಂಡ ಕಿರಿದರಲ್ಲಿ ಹಿರಿದಾದುದನ್ನು ಹೇಳುವ ಕುಶಲತೆಯಂತೆ ಕಾಣುತ್ತದೆ…….

ಇನ್ನು ಪ್ರೇಮನ್ ಅವರ ಮಲಯಾಳಂ ಕಥೆಗಳನ್ನು ಕನ್ನಡದಲ್ಲಿ ಓದುವ ಅವಕಾಶ ನೀಡಿದವರು ಕೆ. ಪ್ರಭಾಕರನ್. ಸಂವೇದನಾಶೀಲ ಅನುವಾದಕರಾಗಿ ಕೆಲವು ಅಪರೂಪದ ಕೃತಿಗಳನ್ನು ಕನ್ನಡಕ್ಕೆ ತಂದವರಾಗಿ ಈಗಾಗಲೇ ಓದುಗರಿಗೆ ಪರಿಚಿತರು. ಅವರ ನೂರು ಸಿಂಹಾಸನಗಳು, ಮೂಕ ತೋಳ, ಗಿನ್ನಲ್ ಬ್ಯಾರಿ ಸಿಂಡೋಮ್ ಕೃತಿಗಳನ್ನು ಓದಿ ನಾನು ಪ್ರಭಾಕರನ್ ಅವರ ಅನುವಾದ ಪ್ರತಿಭೆಗೆ ಬೆರಗಾಗಿದ್ದೇನೆ. ಅವರ ಅನುವಾದಗಳನ್ನು ಓದಿದಾಗ ಕನ್ನಡದ ಕೃತಿ ಎನ್ನುವಷ್ಟು ನೈಜತೆ ಕಾಣುತ್ತದೆ. ಭಾಷಾ ಬಳಕೆ, ವಾಕ್ಯ ರಚನೆ ಮತ್ತು ಅವರು ಸಾಧಿಸುವ ಸಾತತ್ಯದಿಂದ ಎಲ್ಲಿಯೂ ಕೃತಕವೆನ್ನಿಸುವುದಿಲ್ಲ. ಹೀಗಾಗಿ, ಸಹ್ಯವಾಗಿ, ಅನುವಾದಕನ ಪರಿಶ್ರಮವನ್ನು ಶ್ಲಾಘಿಸುತ್ತ ಕೃತಿ ಆಸ್ವಾದನೆ ಸಾಧ್ಯವಾಗುತ್ತದೆ. ಸದ್ಯದ ಪ್ರೇಮನ್ ಕಥೆಗಳ ಅನುವಾದದಲ್ಲಿಯೂ ಪ್ರಭಾಕರನ್ ಆ ತಾದ್ಯಾತ್ಮತೆ ಸಾಧಿಸಿದ್ದಾರೆ. ಅವರ ಪರಿಶ್ರಮ ಕನ್ನಡಿಗರಿಗೆ ಹೊಸ ಲೇಖಕನನ್ನು, ಹೊಸ ಬಗೆಯ ಕಥೆಗಳನ್ನು ನೀಡುತ್ತಿದೆ. ಈ ಕಾರಣದಿಂದ ಪ್ರಭಾಕರನ್ ಅವರಿಗೆ ಕೃತಜ್ಞತೆಗಳು. ಅವರು ಕಸುವು ಇನ್ನಷ್ಟು ಒಳ್ಳೆಯ ಮಲಯಾಳಂ ಕೃತಿಗಳು ಕನ್ನಡಕ್ಕೆ ಬರುವಂತೆ ಮಾಡಲಿ ಎಂದು ಆಶಿಸುವೆ.

                       ಕೇಶವ ಮಳಗಿ


ಇದು ಆಕ್ರಮಣ ಕಾಲದ ಪ್ರೇಮ ಮಲಯಾಳಂ ಸಣ್ಣ ಕಥೆಗಳ ಸಂಕಲನಕ್ಕೆ ಖ್ಯಾತ ಲೇಖರಾದ ಶ್ರೀಯುತ ಕೇಶವ ಮಳಗಿಯವರು ಬರೆದ ಮುನ್ನುಡಿಯ ಸಾಲುಗಳು…

ಕಥಾಸಂಕಲವನ್ನು ಯಾದವಿ ಪ್ರಕಾಶನ, ಮೈಸೂರು ಇವರು ಹೊರತಂದಿರುತ್ತಾರೆ..

ಪ್ರತಿಗಳು ಬೇಕಿದ್ದವರು 9483352850 ಮೊಬೈಲ್ ನಂಬರ್ ಗೆ ಸಂಪರ್ಕಿಸಿರಿ…

My Translated Book of Malayalam Writer Preman Illath’s Akramana Kalada Prema and other Malayalam Short stories

Best comment will get a FREE movie ticket.

Leave a Reply

Your email address will not be published.


*