ನನ್ನ ಅನುವಾದಿತ ಕಥಾ ಸಂಕಲನ… ಮಲಯಾಳಂ ಲೇಖಕ ಸುರೇಶ್ ಕಿಳ್ಳಿಯೂರ್ ಅವರ
ಸೈಬರ್ ಮ್ಯಾಟ್ರಿಮೋನಿ 2025 ಮತ್ತು ಇತರೆ ಮಲಯಾಳಂ ಕಥೆಗಳು….
ಕನ್ನಡ-ಮಲಯಾಳಂ ಎರಡೂ ಭಾವಗಳ ಸಾಹಿತ್ಯದ ಕೊಡುಕೊಳೆ ಬಹಳ ದೊಡ್ಡ ಪ್ರಮಾಣದಲ್ಲೇ ಇದೆ. ಕನ್ನಡದ ಬಹಳಷ್ಟು ಲೇಖಕರು ಮಲಯಾಳಂ ಓದುಗರಿಗೂ ಪರಿಚಿತರು, ಹಾಗೇ ಮಲಯಾಳಂನ ಮುಖ್ಯ ಲೇಖಕರೂ ಕನ್ನಡಿಗರಿಗೆ ಅನುವಾದದ ಮೂಲಕವೇ ಪರಿಚಯವಾಗಿದ್ದಾರೆ. ಇಂಗ್ಲಿಶ್ ಶಿಕ್ಷಣದ ಮೂಲಕ ಹೊಸ ಚಿಂತನೆಗಳಿಗೆ, ರಾಜಕೀಯ ಪ್ರಭಾವಗಳಿಗೆ ತೆರೆದುಕೊಂಡು ಬೆಳೆದ ದಕ್ಷಿಣ ಭಾರತದ ಎರಡು ಮುಖ್ಯ ಭಾಷ್ಪಗಳೆಂದರೆ ಕನ್ನಡ ಮತ್ತು ಮಲಯಾಳಂ.
ಶ್ರೀ ಕೆ. ಪ್ರಭಾಕರನ್ ಅವರು ಇದುವರೆಗೆ ಹದಿನೈದು ಕೃತಿಗಳನ್ನು ಮುಖ್ಯವಾಗಿ ಮಲೆಯಾಳಂ ಮತ್ತು ಇಂಗ್ಲಿಷ್ನಿಂದ ಕನ್ನಡಕ್ಕೆ ತಂದಿದ್ದಾರೆ….
ನನಗೆ ಮಲಯಾಳಂ ಲೇಖಕರಾದ ಶ್ರೀ ರಾಘವನ್ರಂಥ ಹಿರಿಯರಿಂದ ಆರಂಭಿಸಿ ತೇರಳಿ ಶೇಖರ್, ಗಂಗಾಧರನ್, ಮೋಳಿವರ್ಗಿಸ್, ಮೋಹನ ಕುಂಟಾರ್ ಇಂಥ ಹಲವು ಅನುವಾದಕರ ಒಡನಾಟ ಮಾತ್ರವಲ್ಲದೆ ವಾಸುದೇವನ್ ನಾಯರ್, ಸಚ್ಚಿದಾನಂದನ್ ಮುಂತಾದ ಲೇಖಕರನ್ನು ಭೇಟಿಯಾಗಲು ಸಾಧ್ಯವಾಗಿದ್ದೆ ಅನುವಾದವೆಂಬ ಕ್ರಿಯೆಯ ಮೂಲಕ. ಕೆ.ಪ್ರಭಾಕರನ್ ಅವರು ಮಲಯಾಳಂ-ಕನ್ನಡ ಅನುವಾದಕರಾಗಿ ಇಷ್ಟು ಕೆಲಸ ಮಾಡಿದ್ದರೂ ಅವರ ಕೃತಿಗಳನ್ನು ಓದಲಾಗಿರಲಿಲ್ಲ ಎಂಬ ಬಗ್ಗೆ ವಿಷಾದ ಉಳಿದಿದೆ.
ಪ್ರಭಾಕರನ್ ಸಮುದಾಯ ಸಾಂಸ್ಕೃತಿಕ ಸಂಘಟನೆಯಲ್ಲಿ ಸಕ್ರಿಯರಾಗಿದ್ದವರು. ಹಾಗಾಗಿ ಅವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವ ಕೃತಿಗಳಲ್ಲಿ ಸಮಾಜಪರವಾದ, ವೈಚಾರಿಕತೆಗೆ ಪ್ರಾಮುಖ್ಯ ನೀಡುವ ಮತ್ತು ಕಲಾತ್ಮಕವಾಗಿ ಗಮನಸೆಳೆಯುವ ಕೃತಿಗಳೇ ಮುಖ್ಯವಾಗಿವೆ. ಜಯಮೋಹನ್ ರಂಥ ಮುಖ್ಯ ಕಥೆಗಾರರನ್ನು ಕನ್ನಡ ಓದುಗರಿಗೆ ತಲುಪಿಸಿದ್ದಾರೆ. ಯುವ ಕಥೆಗಾರರು ಮಾತ್ರವಲ್ಲದೆ ಇಎಂಎಸ್ ಸರ್ಕಾರವನ್ನು ವಜಾಗೊಳಿಸಿದ ರಾಜಕೀಯ ಘಟನೆಯನ್ನೂ ಒಳಗೊಂಡು, ದಿನದ ಇಪ್ಪತ್ತನಾಲ್ಕು ಗಂಟೆಗಳನ್ನು ಹೇಗೆ ಬಳಸಿಕೊಳ್ಳಬೇಕು ಎಂಬಂಥ ಅನ್ವಯಿಕ ಕೃತಿ, ವಾಸ್ತುಶಿಲ್ಪವನ್ನು ಬರಿತ ಕೃತಿಗಳನ್ನೂ ಅನುವಾದಿಸಿದ್ದಾರೆ. ಅವರ ಆಸಕ್ತಿಯ ವ್ಯಾಪ್ತಿ ಎಷ್ಟು ವಿಸ್ತಾರವೆಂದು ತಿಳಿದು ಸಂತೋಷ, ಹೆಮ್ಮೆಯ ಭಾವಗಳನ್ನು ಅನುಭವಿಸಿದ್ದೇನೆ.
ಸಂತೋಷ ಮತ್ತು ಹೆಮ್ಮೆಗೆ ಇನ್ನೊಂದು ಕಾರಣವೆಂದರೆ ಪ್ರಭಾಕರನ್ ಅವರು ನನ್ನಂಥ ಬಹಳಷ್ಟು ಜನರ ಹಾಗೆ ಬರಹದ ವೃತ್ತಿಯಲ್ಲಿ ತೊಡಗುವ ಅವಕಾಶವಿರುವ ಉದ್ಯೋಗದಲ್ಲಿದ್ದವರಲ್ಲ, ಅಥವಾ ಸಾಹಿತ್ಯ ಬೋಧನೆಯ ವಲಯಕ್ಕೂ ಸೇರಿದವರಲ್ಲ. ಕೆಪಿಸಿಟಿಲ್ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದವರು. ಕನ್ನಡ ಮತ್ತು ಸಮಾಜಶಾಸ್ತ್ರವನ್ನು ಸ್ವಂತ ಆಸಕ್ತಿಯಿಂದ ಅಧ್ಯಯನ ಮಾಡಿದವರು. ಸಮಾಜದ ಬಗ್ಗೆ ಅವರಿಗೆ ಇರುವ ಕಾಳಜಿ, ಭಾಷೆಯನ್ನು ಕುರಿತ ಪ್ರೀತಿ, ಆನುವಾದದ ಮೂಲಕ ಕನ್ನಡಕ್ಕೆ ಅಗತ್ಯವಾದ ವೈಚಾರಿಕ ಮತ್ತು ಕಲಾತ್ಮಕ ಕೃತಿಗಳನ್ನು ಸ್ವಂತದ ಅಪೇಕ್ಷೆಯಿಂದಲೇ ಭಾಷಾಂತರಿಸಬೇಕೆಂಬ ಹಂಬಲ ಇವೆಲ್ಲ ಮೇಲೈಸಿ ಅವರ ಕೃತಿಗಳು ರೂಪುಗೊಂಡಿವೆ.
ಶ್ರೀ ಪ್ರಭಾಕರನ್ ಅವರು ಅನುವಾದಕ್ಕೆ ಆಯ್ಕೆ ಮಾಡಿಕೊಂಡಿರುವ ಸುರೇಶ್ ಕಿಳ್ಳಿಯೂರ್ ಅವರ ಬರಹ ನನಗೆ ಪರಿಚಯವಾದದ್ದೇ ಪ್ರಭಾಕರನ್ ಅವರ ಈ ಕೃತಿಯ ಮೂಲಕ. ಈ ಕಥೆಗಳನ್ನು ಓದುತ್ತ ಸುರೇಶ್ ಅವರು ಯಾಕೆ ಕನ್ನಡ ಓದುಗರ ಗಮನಕ್ಕೆ ಬರುವುದು ಮುಖ್ಯವೆಂದು ಅರಿವಾಯಿತು. ಸುರೇಶ್ ಅವರು ವರ್ತಮಾನ ಕಾಲದ ಬದುಕಿನ ರೀತಿಯಲ್ಲಿ ಕಾಣುವ ವಿಪರ್ಯಾಸಗಳನ್ನು ಆನಾವರಣ ಮಾಡುತ್ತಾರೆ. ಲಘು ಹಾಸ್ಯವೆಂದು ಗುರುತಿಸಬಹುದಾದ ನಿರೂಪಣೆಯ ಶೈಲಿಯನ್ನು ಬಳಸುತ್ತಾರೆ. ಉತ್ತೇಕ್ಷೆಯ ಮೂಲಕವೇ ನಗೆ ಹುಟ್ಟಿಸುತ್ತಾ ಬದುಕಿನ ರೀತಿ ಯಾಕೆ ಹೀಗೆ ಇದೆ ಎಂದು ಓದುಗರು ಪ್ರಶ್ನೆಮಾಡಿಕೊಳ್ಳುವ ಹಾಗೆ ಮಾಡುತ್ತಾರೆ. ನಮ್ಮ ಆರ್ಥಿಕ, ರಾಜಕೀಯ ಆಯ್ಕೆಗಳೇ ಒಬ್ಬೊಬ್ಬ ವ್ಯಕ್ತಿಯ ಬದುಕನ್ನೂ ಹೇಗೆ ಪ್ರಭಾವಿಸುತ್ತವೆ ಅನ್ನುವುದು ಇವರ ಎಲ್ಲ ಕೃತಿಗಳ ಒಳ ಶ್ರುತಿಯಾಗಿ ಕೇಳುತ್ತದೆ. ಬದುಕಿನ ಕಟುವಾಸ್ತವಗಳಾದ ಆರ್ಥಿಕತೆ ಮತ್ತು ರಾಜಕೀಯ ಹೇಗೆ ವ್ಯಕ್ತಿ ಮತ್ತು ಕುಟುಂಬದ ಬದುಕನ್ನೂ ಹದಗೆಡಿಸಿದೆ ಎಂಬುದು ಇವರ ಕಥೆಗಳ ಮುಖ್ಯ ಆಸಕ್ತಿಯಾಗಿ ಕಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಬದಲಾವಣೆಯ ಪ್ರಭಾವವನ್ನು ಎಳೆಯ ತಲೆಮಾರಿನ ಕಣ್ಣಿನಿಂದ ನೋಡುತ್ತ ತೋರಿಸುತ್ತಾರೆ.
ಅವರ ಕೆಲವು ಕಥೆಗಳನ್ನು ನೋಡಿದರೆ ಈ ಅಂಶಗಳು ಸ್ಪಷ್ಟವಾಗುತ್ತವೆ……..
ಉತ್ಪಾದನೆಯ ಕ್ರಮದಲ್ಲಿ, ಉದ್ಯೋಗಕ್ಕೆ ಬಂಡವಾಳ ಹೂಡುವ ರೀತಿಯಲ್ಲಿ ಆಗಿರುವ ಬದಲಾವಣೆಗಳ ಕಾರಣದಿಂದ ವ್ಯಕ್ತಿಗಳು ತಮ್ಮ ದುಡಿಮೆ ಸೃಷ್ಟಿಸುವ ವಸ್ತುಗಳಿಗೂ ತಮಗೂ ಸಂಬಂಧವನ್ನು ಕಡಿದುಕೊಂಡು ಏಕಾಂಗಿಗಳಾಗಿ ಬದುಕುವುದು ಅಥವಾ ಏಲಿಯನೇಶನ್: ವ್ಯಕ್ತಿಗಳನ್ನು ಸಾಮುದಾಯಕ ಬದುಕಿನಿಂದ ದೂರ ಮಾಡಿ ಬಿಡಿಬಿಡಿಯಾದ ಖಾಸಗಿ ಬದುಕಷ್ಟೇ ಮುಖ್ಯವೆಂದು ತಿಳಿಯುವ ಗಿರಾಕಿಗಳಾಗಿ ಬದಲಿಸಿರುವ ಬಂಡವಾಳಶಾಹಿ ಚಿಂತನೆಗಳು ಭಾರತದಂಥ ದೇಶದ ಗತ ಮತ್ತು ವರ್ತಮಾನಗಳ ಸಂಬಂಧವನ್ನು ಕಡಿದು ಹಾಕಿವೆ. ಹಾಗೆಯೇ ಗತಕಾಲದಲ್ಲಿ ಇದ್ದುದೆಲ್ಲವೂ ಚಂದವಾಗಿ ಇರಲಿಲ್ಲ ಎಂದೂ ನಮಗೀಗ ಮನವರಿಕೆಯಾಗಿದೆ. ನಾವು ಒಬ್ಬೊಬ್ಬರೂ ಖಾಸಗಿ ವ್ಯಕ್ತಿಗಳಾಗಿ ನಮ್ಮಲ್ಲಿ ಮೂಡಿಸಲಾಗಿರುವ ಭ್ರಮೆಗಳಲ್ಲಿ ಕರಗಿ ಹೋಗುತ್ತೇವೋ, ನಮ್ಮ ಬದುಕನ್ನು ಸ್ವಲ್ಪ ವಕ್ರವಾಗಿ ನೋಡಲು ಕಲಿತು, ವಿಮರ್ಶಾ ಪ್ರಜ್ಞೆಯನ್ನು ಬೆಳೆಸಿಕೊಳ್ಳುತ್ತೇವೋ ಎಂಬ ಆಯ್ಕೆಯನ್ನು ಸುರೇಶ್ ಅವರ ಕಥೆಗಳು ಓದುಗರ ಮುಂದೆ ಇಡುತ್ತವೆ. ಸುರೇಶ್ ಅವರ ಕಥೆಗಳು ಅನಗತ್ಯ ಬೌದ್ಧಿಕತೆಯ ಭಾರವಿಲ್ಲದೆ ಹೇಳಬೇಕಾದ
ಸಂಗತಿಗಳನ್ನು ಸರಳವಾಗಿ ನೇರವಾಗಿ, ಲಘುದೃಯೊಡನೆ ಗಂಭೀರ ಪ್ರಶ್ನೆಗಳನ್ನು ಮೇಳೈಸಿ ಓದುಗರ ಮುಂದೆ ಇಡುತ್ತದೆ.
ಈ ಕಥೆಗಳ ಅನುವಾದದ ಬಗ್ಗೆ ಎರಡು ಮಾತು ಹೇಳಬೇಕು. ಪ್ರಭಾಕರನ್ ಅವರ್ ಅನುವಾದ ಸಹಜವಾಗಿ ಕನ್ನಡ ಅನಿಸುವಂತಿದೆ. ಹಾಗೆಯೇ ವಾಕ್ಯರಚನೆಯ ಕ್ರಮದಲ್ಲಿ ಅವರು ಮಲಯಾಳಂ ಪದ್ಧತಿಯನ್ನೇ ಅನುಸರಿಸುವುದರಿಂದ ಅಲ್ಲಲ್ಲಿ ಮಲಯಾಳಂ ಭಾಷೆಯ ಸೊಗಡೂ ಓದುಗರ ಅರಿವಿಗೆ ಬರುತ್ತದೆ. ಅಪರೂಪಕ್ಕೊಮ್ಮೆ ಯಾಕೋ ಈ ವಾಕ್ಯ ಬೇರೆ ಥರ ಮಾಡಬಹುದಿತ್ತೇನೋ ಅನಿಸಿದರೂ ಅದು ಅನುವಾದದಲ್ಲಿ ಸಹಜವಾಗಿ ಹುಟ್ಟುವ ಅತೃಪ್ತಿಯಷ್ಟೇ. ಹೀಗೆ ಓದುಗ ಸ್ನೇಹಿಯಾದ ಅನುವಾದಗಳ ಮೂಲಕ ಪ್ರಭಾಕರನ್ ಅವರು ಕನ್ನಡವನ್ನು ಸಮೃದ್ಧಗೊಳಿಸಲಿ ಎಂದು ಹಾರೈಸುತ್ತೇನೆ.
ಓ.ಎಲ್. ನಾಗಭೂಷಣ ಸ್ವಾಮಿ
ಸೈಬರ್ ಮ್ಯಾಟ್ರಿಮೋನಿ 2025 ಮತ್ತು ಇತರೆ ಮಲಯಾಳಂ ಸಣ್ಣಕಥೆಗಳ ಸಂಕಲನಕ್ಕೆ ಖ್ಯಾತ ಲೇಖರಾದ ಶ್ರೀಯುತ ಓ.ಎಲ್.ಎನ್ ನಾಗಭೂಷಣ ಸ್ವಾಮಿ ಅವರು ಬರೆದ ಮುನ್ನುಡಿಯ ಸಾಲುಗಳು…
ಕಥಾಸಂಕಲವನ್ನು ಪ್ರಜ್ಞಾ ಪ್ರಕಾಶನ, ಮೈಸೂರು ಇವರು ಹೊರತಂದಿರುತ್ತಾರೆ..
ಪ್ರತಿಗಳು ಬೇಕಿದ್ದವರು 9483352850 ಮೊಬೈಲ್ ನಂಬರ್ ಗೆ ಸಂಪರ್ಕಿಸಿರಿ…
My translated Book Cyber Matrimony ,2025 and other Malayalam short stories of Malayalam Writer Suresh Killiyoor..
Leave a Reply